Wednesday, 22 April 2020

ಪ್ರೀತಿ ಅಮರ

ಬಾಯಾರಿ ಸೂರ್ಯ ಬಿಸಿಲಾಗಿ ಬಂದಾಗ ಬತ್ತಿಹೋದ ಸಾಗರವ ಕಂಡೆ ।
ಮಳೆ ಬರುವ ಮುನ್ನವೇ ಮೋಡ ಮಾಯವಾದದ್ದನ್ನು  ಕಂಡೆ ।
ಕೋಗಿಲೆ ಹಾಡುವ ಮುನ್ನವೇ ಬಾಡಿದ ಮಾಮರದ ಚಿಗುರನ್ನು ಕಂಡೆ ।
ಹಚ್ಚಿದ ದೀಪ ಉರಿಯುವ ಮುನ್ನವೇ ಆರಿಹೋದದ್ದನ್ನು ಕಂಡೆ ।
ನಾ ಕಂಡ ಪ್ರೀತಿ ಮನದಲ್ಲಿ ಬಿತ್ತಿ ಮೊಳಕೆಯೊಡೆದು ಬೆಳೆದ ಬಳ್ಳಿಯ ಕಚ್ಚಿದ ಮೊಗ್ಗನ್ನು ಕಿತ್ತ ಕಾಣದ ಕೈಗಳ ಕಂಡೆ ।।
ಕಂಡ ಈ ಕನಸು ನಿಜವಾಗುವ ಮುನ್ನ ಕಣ್ಬಿ ಟ್ಟು ನೋಡಿದಾಗ ...
ನಾ  ನೋಡಿದಾಗ ....
ಸೂರ್ಯನ ಬಾಯಾರಿಕೆ ತೀರಿ ಮೋಡ ಕವಿದಿತ್ತು ।
ಮೋಡ ಕರಗಿ ಮಳೆಯಾಯಿತು ।
ಮಾಮರದ ಚಿಗುರೆಲೆ ನಡುವೆ ಕೋಗಿಲೆ ಹಾಡುತಿತ್ತು ।
ಹಚ್ಚಿದ ದೀಪ ಬೆಳಕನ್ನು ಬೀರುತಿತ್ತು ।
ಅವಳ ಮುಖದಲ್ಲಿ ನಗು ಮನೆ ಮಾಡಿತ್ತು ।
ಕಣ್ಣಲ್ಲಿ  ಪ್ರೀತಿ ಕಾಣುತಿತ್ತು ।
ಕಂಡ ಕೆಟ್ಟ ಕನಸು ಕನಸಾಗಿಯೇ ಉಳಿಯಿತು ।।
ಪ್ರೀತಿಯು ಅಮರವಾಯಿತು ।।

ನಗು

ನಿನ್ನ ನಗುವಿನ ನರ್ತನಕ್ಕೆ ।
ನಕ್ಷೆಯಿಲ್ಲದ ನಾವಿಕನಾದೆ ನಾನು ।
ಅಮಲಿನ ಹಡಗಲ್ಲಿ , ಪ್ರೀತಿಯ ಕಡಲಲ್ಲಿ ।।

ಕಲೆಯಿದ್ದೂ ಕಾಸವಾದೆ ।
ಕನಸಿದ್ದೂ ಕುರುಡನಾದೆ ।
ಈ ಕಟುಕರ ಸಂತೆಯಲ್ಲಿ ।।

ಬಣ್ಣದ ಬದುಕು

ಬೆಳಗೆದ್ದು ಬದುಕಿಗೆ ಬಣ್ಣ ಬಳಿದುಕೊಂಡು
ಭಾಗವಹಿಸುವ ಬಯಲಾಟಕ್ಕೆ ಬಿಡುವೆಲ್ಲಿದೆ  ??


ಅರಿವು

ನಾ ಓದಿದವು ಬರೇ ಪುಟಗಳಲ್ಲ ।
ಬೆಟ್ಟದ ತುದಿಯಲ್ಲಿ ಜ್ಞಾನದೆತ್ತರ ಬೆಳೆದು ನಿಂತಿದ್ದ ಆ ಮರದ ಎಲೆಯೋ  ।
ಆ ಮರಕ್ಕೆ ತಬ್ಬಿ ಹಬ್ಬಿ ದ್ದ ಬಳ್ಳಿಯ ಹೂವಿನ ದಳವೋ ।
ಅರಸಿ ಬಂದೆ ಏನನ್ನೋ ।
ಅರಿತೆ ನಾನು ನನ್ನನ್ನು ।। 

ಪ್ರೀತಿಯ ಹೆಸರು ನೀನೆ

ಈ ಬದುಕಿನ ಬೆಳಕು ನೀನೆ ।
ಈ ಬಾಳಿನ ಬದಲಾವಣೆ ನೀನೆ ।
ಈ ಮನಸಿನ ರಾಣಿ ನೀನೆ ।
ಈ ಹೃದಯದ ಒಡತಿ ನೀನೆ ।
ಈ ಪ್ರೀತಿಯ ಗುರುವು ನೀನೆ ।


ನೀನೆ ನೀನೆ ... 


ಈ ಪ್ರೀತಿಯ ಹೆಸರು ನೀನೆ ।।

ಮಳೆ ಬರದ ಕಥೆ

ಕತ್ತಲಲ್ಲಿದ್ದಾಗ ಕಂಡೆ ನೀನು ಮಿಂಚಿನ ಹಾಗೆ ।
ಬಂದೆ ನೀನು ಬೆಳಕಿನ ಹಾಗೆ ।
ಕಣ್ಣುಜ್ಜಿ ನೋಡುವ ಮುನ್ನ ಮಾಯವಾದೆ ಏಕೆ ?
ಅಂದುಕೊಂಡಿದ್ದೆ ನೀ ನನ್ನ ಬಾಳಿನ ಹಣತೆ ।
ನೀ ಮರೆಯಾದದ್ದು ಮರೆಯಲಾರದ ವ್ಯಥೆ ।
ಇದೊಂದು ಗುಡುಗಿ ಘರ್ಜಿಸಿ ಮಳೆ ಬರದ ಕಥೆ ।।

ಭೇಟಿಯ ನೆನಪು

ನಿಂತಲ್ಲೇ ಮರೆವೆ ನಾನು ನನ್ನನ್ನು ।
ಕೂತಲ್ಲೇ ನಗುವೆ ನೆನೆದು ನಿನ್ನನ್ನು ।
ದಿನವಿಡೀ ಕಳೆಯುವೆ ಮೆಲುಕುತ್ತಾ ನಮ್ಮ ಭೇಟಿಯ ನೆನಪನ್ನು ।।
ಮನದಲ್ಲಿ ಮನೆ ಮಾಡಿದ್ದರೂ ಸಿಗದೇ ಏಕೆ ಓದುವೆ ನೀನು ।
ಓಡಿದರೂ ಕಾದು ಕೂರುವೆ ಬಯಸಿ ನಿನ್ನ ನಾನು ।। 

ಕರೆಯೋಲೆ

ಒಮ್ಮೆ ಮನ ಧುಮುಕಿತು ಪ್ರೀತಿಯ ಕಡಲೊಳ್ ।।
ಕೈ ತಾನಾಗಿಯೇ ಬರೆಯಿತೊಂದು ಕರೆಯೋಲೆಯ ।
ಕೊರಳು ಕುಣಿದು ಹಾಡಿತೊಂದು ಹಾಡು ತಾಕಲು ನಿನ್ನೆದೆಯ ।
ನಾಲಿಗೆ ನಲಿದು ನುಡಿಯಿತೊಂದು ಸಾಲು "ನಿನಗಾಗಿ ಗೆಲ್ಲುವೆ ಜಗವ" ।।

ನಾಳೆ

ನಾಳೆ ಎಂಬುದು ತೆರೆಯದ ಪುಟ ।
ಹರುಷದ ಗದ್ಯವೋ,
ದುಃಖದ ಪದ್ಯವೋ,
ಅರಿತವರಾರು.....
ಅಕ್ಷರಗಳು ನಗಿಸುವವೋ,
ಕಣ್ಣೀರ ಹರಿಸುವವೋ,
ಬಲ್ಲವರಾರು .....
ಅರಿಯದ ನಾಳಿನ ಕೊನೆ ಸಾಲಿಗಿಂತ,
ಅರಿತ ಇಂದಿನ ಮುನ್ನುಡಿಯೇ ಲೇಸು ।।

ಪ್ರೀತಿಯ ಗೋಪುರ

ನಿನ್ನ ಅಂಗೈಮೇಲೆ ಕಟ್ಟಿರುವೆ ಗೋಪುರ ।।
ನಿನ್ನ ಪ್ರೀತಿಯ ನೋಟವೇ ಕಂಬಗಳು ।
ನಿನ್ನ ಮಧುರ ಮಾತುಗಳೇ ಮೆಟ್ಟಿಲುಗಳು ।
ನಿನ್ನ ಹಠವೇ ಹೆಂಚಿನ ಛಾವಣಿ ।
ನಿನ್ನ ಅಂಗೈಮೇಲೆ ಕಟ್ಟಿರುವೆ ಗೋಪುರ ।।
ಅಲುಗದಿರಲಿ ಅವರಿವರ ಮಾತಿಗೆ ।
ಮಣ್ಣಾದೀತು ನನ್ನ ಪ್ರೀತಿಯ ಗೋಪುರ ।।

ಬೆಳಕು

ಬಾಳಿನ ಬೆಳಕೇ....
ಬರದೇ ಏಕೆ ದೂರ ಇರುವೆ ಬಾಳಿಗೆ ।
ಬದುಕೆಲ್ಲಾ ಕಾಯುವೆ ಬಾ ಬಳಿಗೆ ।
ಬರೆದುಬಿಡು ನನ್ನೆದೆಯ ಮೇಲೆ ಬಂಗಾರದ ಬರವಣಿಗೆ ।। 

ಪ್ರೇಮದುಡುಗೊರೆ

ಮನಸ ನಗಿಸುವ ನಿನ್ನ ಕರೆಗಾಗಿ ಕಾದು ಕುಳಿತಿರುವೆ ।
ನೀ ಸಿಗುವ ದಾರಿ ನೋಡುತ್ತಿರುವೆ ।।

ಅಕ್ಷಿ ಅರಸಿದೆ ನಿನ್ನ ನೋಡಲು ।
ಮನ ಮರೆತಿದೆ ಬೇರೆಲ್ಲವನು ।
ಕಾದಿಹೆ ಹಿಡಿಯಲು ನಿನ್ನ ಕರವನ್ನು ।
ನಿಂತಿಹೆ ನಾ ತುದಿಗಾಲಲ್ಲಿ ಕೊಡಲು ಪ್ರೇಮದುಡುಗೊರೆಯೊಂದನ್ನು   ।।

ಸೆಳೆದೆ ಏಕೆ ಕಣ್ಣಲ್ಲಿ

ಏನಡಗಿದೆ  ನಿನ್ನ ಮನದಲ್ಲಿ ।
ಸೆಳೆದೆ ಏಕೆ ಕಣ್ಣಲ್ಲಿ ।।
ಹೃದಯದ ಬಾಗಿಲೇಕೆ ಬಡಿದೆ ನೀನು ।
ಕದವ ತೆರೆದೊಡೆ ಬಿಗಿದಪ್ಪಿ ಸೇರಿದೆ ನನ್ನ ಏಕೆ ನೀನು ।।
ಎಲ್ಲಕ್ಕೂ ಉತ್ತರ ಸಿಗಬಹುದೇ ।
ನೀ ಇಲ್ಲದ ಬದುಕು ಕಲ್ಪಿಸಲು ಸಾಧ್ಯವೇ ।।

ದೊರೆ

ಕೊಟ್ಟು  ಕಾಣುವ ಆ ದೊರೆ,

ಕೊಡದೇ ನೋಯಿಸುವ ಆ ದೊರೆ,

ಕೇಳಿದೊಡನೆ ಕೊಡಲು ಅರಿವುದೇ ಅದರ ಬೆಲೆ,

ಕೊಡದೇ ಇರದೊಡೆ ತಿಳಿವುದೇ ಅದರ ಖುಷಿ, 

ಇಂದು ಕಿತ್ತರೆ ಕಸಕಟ್ಟೆ ಕಾಯಿ,

ಕಾಯೆಂದು ಬಿಸಾಡಿದೊಡೆ,

ನಾಳಿನ ಹಣ್ಣು ಎಸೆದಂತಲ್ಲವೇ ।।


ಬದುಕು

ಬುದ್ಧಿಗೂ ಭ್ರಮೆಗೂ ನಡುವಡಗಿದ್ದ 

ಬೆಸುಗೆ ಕಳಚಿ ಕಾಣಿಸಿತು ಭುವಿಯ

 ಬರಿದಾದ ಬದುಕು. 

ನನ್ನವ್ವ

ಒಡಲಲ್ಲಿ ನನ್ನ ಬಚ್ಚಿ , ಬಂದೊಡನೆ ಪ್ರೀತಿ ತುಂಬಿ 

ಅವಳೆತ್ತರ ನನ್ನ ಬೆಳೆಸಿ , ನನ್ನ ನಗುವಲ್ಲಿ ಅವಳ ನಗುವ ಕಂಡು,

ಕೋಪದೊಳು ನಾ ಬೈದೊಡೆ ನಕ್ಕಿ ಸುಮ್ಮನಾಗಿ, 

ಮುದ್ದಾಗಿ ನಾ ಕರೆದೊಡೆ ಮಗುವಾಗಿ ಬಳಿ ಬಂದು ಮುದ್ದಿಸಿ 

ನನ್ನ ಸಲಹಿದವಳು ನನ್ನವ್ವ. 

ಗೆಲುವು

ಸೋಲೆಂಬ ಸೈನ್ಯವ ಸದೆಬಡಿದು ಸುಡುಗಾಡಿನೆಡೆಗಟ್ಟುವ

ಕೂಸು ಮಲಗಿರುವನು ಧೈರ್ಯದ ಕವಚ ತೊಟ್ಟು ನಿನ್ನೊಳು ;

ಬಡಿದೆಬ್ಬಿಸಿ ಅವನನ್ನು ;

ಪೋಷಿಸಿ ಬೆಳೆಸಿ ಕಾದಾಡಿ ಏರಿ ಘರ್ಜಿಸಿ ಕುಣಿದಾಡು, 

ಗೆಲುವಿನ ಶಿಖರದೊಳು ।।

ರಾಜ ರಾಣಿ

ಕಂಬನಿ ಜಾರಿದೊಡೆ ನಿನ್ನ ಬಳಿ ನಾ ನಿಲ್ಲುವೆ...
ನಾನು ಕುಗ್ಗಿದೊಡೆ ನಿನ್ನಕ್ಕರೆಯ ಮಡಿಲೊಳು ಮಲಗುವೆ ।।


ಎನಗೆ ನೀ ರಾಣಿ... ನಿನಗೆ ನಾ ರಾಜನಾಗಿರಲ್ ...
ವಾಸ್ತವೊರ್ಯುದ್ಧವ ಕಾದು ಗೆದ್ದು ನೆಡಪೆ  ಪತಾಕೆ ಪ್ರೇಮ ಶಿಕರದೊಳ್ ।।


ನೀನು ನನಗಾಹರಿಕೊಟ್ಟಿರ್ಪ ಬಾಳಿನ ಕಳೆ...
ನಿನ್ನ ನಯನದೊಳಿರುವುದು ನನ್ನ ಕನಸಿನ ಅಲೆ..
ನನ್ನ ಎದೆಯೊಳಗೆ ಆಗುತಿಹುದು ಸದಾ ಪ್ರೀತಿಯ ಮಳೆ ।।

ಮುತ್ತಿನ ಹಾರ

ಇಬ್ಬರೂ ಸೇರಿ,

ಭೇಟಿಯೆಂಬ ನೂಲಿಗೆ ಸಂತಸದ ಮುತ್ತನ್ನು ಪೋಣಿಸಿ,
ಬಂಧನದ ಗಂಟು ಬಿಗಿದು,
ಮಾಡಿದ ಆ ನೆನಪಿನ ಹಾರವನ್ನು ಒಬ್ಬರಿಗೊಬ್ಬರು ಕೊಟ್ಟು
ಹೊರಟರು ಅವರವರ ದಾರಿಗೆ....


ಇಬ್ಬರಿಗೂ ತಾಕುತಿಹುದು ವಿರಹದ ಬಿಸಿ,
ದೂರವಿದ್ದರೂ ಮನದಿ ಬೆಳೆಯುತಿಹುದು ಪ್ರೀತಿಯ ಸಸಿ.

Tuesday, 21 April 2020

ವಾಸ್ತವ

ನಮ್ಮೊಳಗೇ ಹುಟ್ಟಿದ ಕಾಣದ ಕಡಲಿನ ಯಾನದ ಆಸೆಯ ಕನಸನ್ನು ಕಟ್ಟಿ  ಕೊಂದು ಕಣ್ಣಂಚಿನ ಕಂಬನಿಯೊಂದಿಗೆ ಕೊನೆಮಾಡುವುದು ।।